ಬಡವ ಬಲ್ಲಿದರ ಸಂಘರ್ಷಕ್ಕೆ ಕಾಟೇರನ ಶಕ್ತಿ-- ರೇಟಿಂಗ್ : 4/5 ****
Posted date: 29 Fri, Dec 2023 11:16:50 PM
ದಶಕಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ರೂಡಿಯಲ್ಲಿದ್ದ ಗೇಣಿಪದ್ದತಿ ಹಾಗೂ ಬಡವ ಬಲ್ಲಿದರ ನಡುವಿನ ಸಂಘರ್ಷದ ಕಥೆ. ಕಾಟೇರ ಚಿತ್ರದ ಮೂಲಕ ನಿರ್ದೇಶಕ ತರುಣ್  ಹೇಳಿದ್ದಾರೆ, ಆಗೆಲ್ಲ ಸ್ವಂತ ಹೊಲ, ಜಮೀನು ಇಲ್ಲದ ರೈತರು ಸ್ವಂತ ಜಮೀನು ಹೊಂದಿದ್ದ ಜಮೀನ್ದಾರರ ಹೊಲದಲ್ಲಿ ತಾವೇ ಉತ್ತಿಬೆಳೆದ ದವಸ ಧಾನ್ಯಗಳನ್ನು ಇಂತಿಷ್ಟು ಅಂತ ಮಾಲೀಕರಿಗೆ ಒಪ್ಪಿಸಬೇಕಿತ್ತು, ದಶಕಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬಂದ ರೈತರು ಜೀವನಪೂರ್ತಿ ಹೀಗೇ ಹೊಲದಲ್ಲಿ  ದುಡಿಯಬೇಕಿತ್ತು, ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜು ಅರಸರ ಸರ್ಕಾರ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನನ್ನು ಜಾರಿಗೊಳಿಸಿ, ಈ ಗೇಣಿ ಪದ್ದತಿಯನ್ನು ರದ್ದುಗೊಳಿಸಿತು, ಇದರಿಂದ ಬಡರೈತ ನಿಟ್ಟುಸಿರು ಬಿಟ್ಟರೆ,  ಜಮೀನ್ದಾರರು ತಮ್ಮ ಹೊಲಗಳನ್ನು ಕಳೆದುಕೊಂಡರು. ಈ ಸಂದರ್ಭದಲ್ಲಿ ರೈತರ, ಭೂಮಾಲೀಕರ ನಡುವೆ ನಡೆದ ಸಂಘರ್ಷದ ಕಥೆಯೇ ಕಾಟೇರ, ಹೋರಾಟದ ಕಥೆಗೆ ನಿರ್ದೇಶಕ‌ ತರುಣ್  ಕಮರ್ಷಿಯಲ್ ಟಚ್ ನೀಡಿದ್ದಾರೆ, ಸಿನಿಮಾ ಆರಂಭವಾಗುವುದೇ ಕಾಲುವೆ ಕಾಮಗಾರಿ ನಡೆಸುವಾಗ ಒಂದೇ ಸ್ಥಳದಲ್ಲಿ ಸಿಕ್ಕ ೧೦೭ ಅಸ್ಥಿಪಂಜರಗಳ ಪ್ರಕರಣದಿಂದ. ಆ ಅಸ್ತಿಪಂಜರಗಳ ಹಿನ್ನೆಲೆ ಹುಡುಕುತ್ತಾ ಹೋದಂತೆ ಈ ರೈತ ಹೋರಾಟ, ಜಾತಿ ಸಂಘರ್ಷದ ಕಥೆ ತೆರೆದುಕೊಳ್ಳುತ್ತದೆ, ಬಡವ, ಬಲ್ಲಿದನೆಂಬ ಬೇದ ಭಾವ, ಶ್ರೀಮಂತರ ದಬ್ಬಾಳಿಕೆ ಇದನ್ನೆಲ್ಲ ಚಿತ್ರದಲ್ಲಿ ಎಳೆಎಳೆಯಾಗಿ  ಬಿಚ್ಚಿಡಲಾಗಿದೆ. 
 
ಊರಮ್ಮನ ಜಾತ್ರೆಯಲ್ಲಿ ಕೋಣನಬಲಿ ಕೊಡುವ ಪದ್ದತಿ, ಬಡವರ ಮೇಲೆ ಉಳ್ಳವರ ದಬ್ಬಾಳಿಕೆ ಇಂಥ ವಿಷಯಗಳನ್ನು ಒಬ್ಬ ಕಮರ್ಷಿಯಲ್ ಹೀರೋ ಮೂಲಕ ಹೇಗೆ ಹೇಳಬೇಕೆಂಬುದನ್ನು ಅರಿತಿರುವ ತರುಣ್ ಸುಧೀರ್, ಹಾಗೇ ತೆರೆ ಮೇಲೆ ಮೂಡಿಸಿದ್ದಾರೆ. ಉಳುವವನೇ ಭೂಮಿಯ ಒಡೆಯ ಎಂಬ ಕಾನ್ಸೆಪ್ಟ್ ಮೇಲೆ ಬೆಳಕು ಚೆಲ್ಲುವ ಪ್ರಯತ್ನದೊಂದಿಗೆ ಬಂದ  ಕಾಟೇರ ಸಮಸ್ತ ಸಿನಿರಸಿಕರ ಮನ ಗೆದ್ದಿದೆ, ತಾನಾಯಿತು, ತನ್ನ ಕೆಲಸವಾಯಿತು ಎಂದು  ಕುಲುಮೆ ಕೆಲಸ ಮಾಡಿಕೊಂಡಿದ್ದ ಕಾಟೇರ (ದರ್ಶನ್). ಊರ ಜನರಿಗೆ ಕುಡುಗೋಲು, ಕತ್ತಿ, ಕೊಡಲಿ, ಮಚ್ಚು ಹೀಗೆ ಹೀಗೆ ಯಾವುದೇ ಉಪಕರಣ ಬೇಕಿದ್ರೂ ಅದು ಆತನ ಕೈನಿಂದಲೇ ಹೊರಬರಬೇಕಿತ್ತು, ಆ ಊರ ಜಮೀನ್ದಾರ ದೇವರಾಯ(ಜಗಪತಿಬಾಬು) ಹಳ್ಳಿರೈತರ ಬದುಕನ್ನ ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದ, ರೈತರ ಬಹುಪಾಲು ಬೆಳೆ ಆತನ ಮನೆಯ ಉಗ್ರಾಣ ಸೇರುತ್ತಿತ್ತು, ಮತ್ತೊಂದೆಡೆ ಊರ ಶಾನುಭೋಗರ ಮಗಳು ಪ್ರಭಾ(ಆರಾಧನಾ)ಗೆ ಚಿಕ್ಕವಯಸಿಂದ ಕಾಟೇರನ ಮೇಲೆ ಎಲ್ಲಿಲ್ಲದ ಪ್ರೀತಿ. ಆತ ನೀನು ಮೇಲ್ಜಾತಿಯವಳು ಸರಿಹೊಂದುವುದಿಲ್ಲ ಎಂದರೂ ಆಕೆ ಕೇಳದೆ,  ಪ್ರೀತಿಗಾಗಿ ಮನೆಯವರನ್ನೇ ತೊರೆದು ಕಾಟೇರನ ಬಯಸಿ ಬರುತ್ತಾಳೆ. 
   
ಇಡೀ ಚಿತ್ರವನ್ನು ನಟ ದರ್ಶನ್  ಆವರಿಸಿಕೊಂಡಿದ್ದಾರೆ. ಯುವ ಹಾಗೂ ವಯಸ್ಸಾದ ವ್ಯಕ್ತಿಯ ಗೆಟಪ್‌ನಲ್ಲಿ ಗಮನ ಸೆಳೆಯುತ್ತಾರೆ,  ದರ್ಶನ್ ಸಿನಿ ಜರ್ನಿಯಲ್ಲಿ  ನೆನಪಾಗಿ  ಉಳಿಯುವ ಚಿತ್ರ ಇದಾಗಲಿದೆ. ದಲಿತರು, ರೈತರ ಪರವಾಗಿ `ಧ್ವನಿಎತ್ತಿ ಸಮಾಜದಲ್ಲಿ ಗೇಣಿ ಪದ್ಧತಿ ನಿರ್ಮೂಲನೆಗೆ ನಾಯಕ ಹೋರಾಡುವ ರೀತಿ ಅದ್ಭುತವಾಗಿದ್ದು, ರಾಮ್ ಲಕ್ಷ್ಮಣ್ ಅವರ ಸಂಯೋಜನೆಯ ಸಾಹಸ ದೃಶ್ಯಗಳಲ್ಲಿ ನಿಜಕ್ಕೂ ಅಬ್ಬರಿಸಿದ್ದಾರೆ.
   
ನಟಿ ಮಾಲಾಶ್ರೀ ಪುತ್ರಿ ಆರಾಧನಾ ಪ್ರಥಮ ಪ್ರಯತ್ನದಲ್ಲೇ  ಶ್ರಮವಹಿಸಿ ಲವಲವಿಕೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಂಬಾ ಸರಾಗವಾಗಿ ಡಾನ್ಸ್ ಸ್ಟೆಪ್ ಹಾಕಿರುವ ಆರಾಧನಾ, ಮುಂದೆ  ಉತ್ತಮ ನಟಿಯಾಗುವ ಲಕ್ಷಣ ಹೊಂದಿದ್ದಾರೆ.  ನಟಿ ಶ್ರುತಿ ಅವರು ಎಂದಿನಂತೆ ಹೆಂಗಳೆಯರ ಮನಗೆದ್ದಿದ್ದಾರೆ, ಇನ್ನು ರವಿಚೇತನ್, ಜಗಪತಿಬಾಬು, ವಿನೋದ್ ಆಳ್ವ, ಬಿರಾದಾರ್, ಕುಮಾರ್ ಗೋವಿಂದ್,  ಮಾಸ್ಟರ್ ರೋಹಿತ್, ಅವಿನಾಶ್  ಈ ಎಲ್ಲ ಪಾತ್ರಗಳಿಗೂ ನಿರ್ದೇಶಕರು ಸಮಾನ ಅವಕಾಶ ನೀಡಿದ್ದಾರೆ. 
 
ರೈತರ ಬಗ್ಗೆ ಇರುವ ಇಂತಹ ವಿಭಿನ್ನ ಕಂಟೆಂಟನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಿರುವ ರಾಕ್‌ಲೈನ್ ವೆಂಕಟೇಶ್ ಅವರ ಸಾಹಸವನ್ನು ಮೆಚ್ಚಲೇಬೇಕು. ಈ ಪಾತ್ರವನ್ನು ದರ್ಶನ್ ಬಿಟ್ಟರೆ, ಬೇರಾವ ಕಲಾವಿದರಿಂದಲೂ ಕಮರ್ಷಿಯಲ್ಲಾಗಿ ಹೇಳುವುದು ನಿಜಕ್ಕೂ ಕಷ್ಟಸಾಧ್ಯವೇ. ಈ ಪ್ರಯತ್ನದಲ್ಲಿ ನಿರ್ದೇಶಕ ತರುಣ್ ಸುಧೀರ್ ಅವರ ಸಾಹಸ ಅದ್ಭುತವಾಗಿದೆ. ತರುಣ್  ಹಾಗೂ ಜಡೇಶ್ ಕೆ.ಹಂಪಿ ಅವರ ಚಿತ್ರಕಥೆಯ ಜೊತೆಗೆ ಮಾಸ್ತಿ ಅವರ ಖಡಕ್  ಸಂಭಾಷಣೆಗಳು  ಈ ಚಿತ್ರದ ಹೈಲೆಟ್ ಆಗಿವೆ.
 
ಕಥ ತಕ್ಕಂತೆ ಚಿತ್ರಕ್ಕೆ ಚಿತ್ರಕ್ಕೆ ಸಹ-ನಿರ್ದೇಶಕ  ಮತ್ತು ರೈತಗೀತೆ  ಸಾಂಗ್​ ಬರೆದ ಪುನೀತ್ ಆರ್ಯ ಅತ್ಯುತ್ತಮ ವಿ.ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. ಛಾಯಾಗ್ರಾಹಕ ಸುಧಾಕರ್ ತಮ್ಮ ಕ್ಮಾಮೆರಾ ಕೈಚಳಕದ ಮೂಲಕ  ಇಡೀ ಚಿತ್ರವನ್ನು  ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed